Tuesday, 17 February 2026

ಕುಡವಾಯಿಲ್ ಬಾಲಸುಬ್ರಮಣಿಯನ್ - ತಮಿಳುನಾಡಿನ ದೇವಾಲಯಗಳ ಕಲಾ ಪರಂಪರೆ : ಒಂದು ನೋಟ- ತಾಮರೈಕ್ಕಣ್ಣನ್

ಕುಡವಾಯಿಲ್ ಬಾಲಸುಬ್ರಮಣಿಯನ್

ಕುಡವಾಯಿಲ್ ಬಾಲಸುಬ್ರಮಣಿಯನ್ ರವರು ತಮಿಳುನಾಡಿನ ಸುಪ್ರಸಿದ್ಧ ಇತಿಹಾಸಕಾರರು.ಇವರು 50 ವರ್ಷಗಳಿಗೂ ಹೆಚ್ಚಿನ ಸುದೀರ್ಘ ಸಂಶೋಧನಾ ಅನುಭವವನ್ನು ಹೊಂದಿದ್ದಾರೆ. ಸಮಕಾಲೀನ ಇತಿಹಾಸದ ಅಧ್ಯಯನಗಳು ಹೆಚ್ಚಾಗಿ ರಾಜಕೀಯ ಆಡಳಿತ ಮತ್ತು ಸಾಮಾಜಿಕ ರಚನೆಗಳಿಗೆ ಆದ್ಯತೆ ನೀಡಿದರೆ ಇವರ ಸಂಶೋಧನೆಯ ಮೂಲಧಾತುವಾಗಿ ದೇಗುಲ ಶಿಲ್ಪದ ಸಾಂಸ್ಕೃತಿಕ ಅಂಶಗಳಿಂದ ಇತಿಹಾಸವನ್ನು ಪುನರ್ನಿರ್ಮಿಸುತ್ತಿದ್ದಾರೆ. ಈಗ ಅಳಿವಿನಂಚಿನಲ್ಲಿರುವ ಕಲಾತ್ಮಕ ಅಂಶಗಳು ಮತ್ತು ಸಾಂಸ್ಕೃತಿಕ ಸಂಪ್ರದಾಯಗಳು ಸೀಮಿತ ವಿದ್ವತ್ಪೂರ್ಣ ಗಮನವನ್ನು ಪಡೆಯುತ್ತಿದ್ದರೂ ಇವು ಬಾಲಸುಬ್ರಮಣಿಯನ್ ಅವರ ಕೃತಿಗಳ ವೈಶಿಷ್ಟ್ಯವಾಗಿವೆ.

ತಮಿಳುನಾಡಿನ ತಂಜಾವೂರಿನ ಕುಡವಾಯಿಲ್ ಪ್ರಾಂತ್ಯದ ಪೆರುಮಂಗಲಂ ಗ್ರಾಮದಲ್ಲಿ 1948 ರಲ್ಲಿ ಜನಿಸಿದರು. ಇತಿಹಾಸದೊಂದಿಗಿನ ಇವರ ಒಡನಾಟವು ತಮ್ಮಊರಿನಲ್ಲಿ ಚೋಳ ರಾಜಮನೆತನದ ನಾಣ್ಯಗಳನ್ನು ಹುಡುಕುವಲ್ಲಿಂದ ಶುರುವಾಯಿತು. 1970 ರ ನಂತರ ಪುರಾತತ್ವ ಶಾಸ್ತ್ರಜ್ಞರಾದ ನಾಗಸ್ವಾಮಿಯವರ ಮಾರ್ಗದರ್ಶನದಲ್ಲಿ ಇತಿಹಾಸ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅಂತರ್ ಶಿಸ್ತೀಯ ಅಧ್ಯಯನಗಳಿಂದ ಮತ್ತು ಸರಸ್ವತಿ ಮಹಾಲ್ ಗ್ರಂಥಾಲಯದಲ್ಲಿನ ಅಧ್ಯಯನಗಳಿಂದ ಅವರ ಸಂಶೋಧನೆಯು ಪಕ್ವವಾಗುತ್ತಾ ಬಂತು. ಶ್ರೀಯುತರು 2006 ರಲ್ಲಿ ನಿವೃತ್ತರಾದರು. ಆರಂಭದಿಂದಲೂ, ಬಾಲಸುಬ್ರಮಣಿಯನ್ ಅವರು ತಂಜಾವೂರನ್ನು ತಮ್ಮ ಸಂಶೋಧನೆಯ ಕೇಂದ್ರಬಿಂದುವಾಗಿ ಆರಿಸಿಕೊಂಡರು. ಮುತ್ತರೆಯರ್, ಚೋಳರು, ನಾಯಕರು ಮತ್ತು ಮರಾಠರು ಆಳ್ವಿಕೆ ನಡೆಸಿದ ಈ ಪ್ರದೇಶವು ಬಹು-ಶ್ರೇಣಿಯ ರಾಜಕೀಯ, ಕಲಾತ್ಮಕ ಮತ್ತು ಪುರಾತತ್ವ ಇತಿಹಾಸಗಳನ್ನು ತನ್ನೊಳಗಿರಿಸಿಕೊಂಡಿದೆ. ದಶಕಗಳ ಕಾಲ ಚೋಳ ಕಾಲದ ವಾಸ್ತುಶಿಲ್ಪ ವೈಭವವನ್ನು ಮತ್ತು ನಾಯಕ ಮತ್ತು ಮರಾಠರ ಕಾಲದ ಶ್ರೀಮಂತ ಸಾಂಸ್ಕೃತಿಕ ಕಲಾತ್ಮಕತೆಯನ್ನು ಜಗತ್ತಿಗೆ ತೆರೆದಿಡುವ ಪರಂಪರೆಗೆ ಅವರು ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದಾರೆ.

ಇವರ ಸಂಶೋಧನೆಗಳು ಹಲವು ಆಯಾಮಗಳಲ್ಲಿ ವ್ಯಾಪಿಸಿದ್ದರೂ ದೇಗುಲಗಳ ಶಿಲ್ಪಶಾಸ್ತ್ರವು ಇವರ ಕೃತಿಯ ಪ್ರಮುಖ ವಿಷವಾಗಿವೆ. ತಮಿಳುನಾಡಿನಲ್ಲಿ ಕಾವೇರಿ ನದಿಯ ತಟದಲ್ಲಿರುವ ಎಲ್ಲಾ ಭವ್ಯ ದೇವಾಲಯಗಳಿಂದ ಸಣ್ಣ ಗುಡಿಗಳನ್ನೂ ಸೇರಿ ಅವರು ಅಧ್ಯಯನ ಮಾಡಿ, ಅಲ್ಲಿನ ಐತಿಹಾಸಿಕ ನೂನ್ಯತೆಗಳನ್ನು ಸರಿಪಡಿಸಿ ಇತಿಹಾಸ ಸಂಶೋಧನೆಗೆ ಹೊಸನೋಟಗಳನ್ನು ನೀಡಿದ್ದಾರೆ. ಗಮನೀಯವಾಗಿ ಇವರು ಪ್ರಸಿದ್ದ ಅರಸ ರಾಜೇಂದ್ರ ಚೋಳನು ಆಷಾಢ ಮಾಸದ ಆರಿದ್ರ ನಕ್ಷತ್ರದಲ್ಲಿ ಹುಟ್ಟಿದನೆಂದು ಪ್ರತಿಪಾದಿಸಿದ್ದಾರೆ.

ಲೇಖಕ ಜಯಮೋಹನ್ ಅವರು ಕುಡವಾಯಿಲ್ ಬಾಲಸುಬ್ರಮಣಿಯನ್ ಅವರ ವಿಧಾನವನ್ನು ಇತಿಹಾಸದ ಸೂಕ್ಷ್ಮ ಗ್ರಹಿಕೆ ಎಂದು ನಿರೂಪಿಸುತ್ತಾರೆ. ಇವರು ಹಿಂದಿನ ವಿದ್ವಾಂಸರು ಸ್ಥಾಪಿಸಿದ ಸ್ಥೂಲ ಇತಿಹಾಸಗಳ ಹೊರತಾಗಿ ಆಳವಾದ ಅಧ್ಯಯನಗಳನ್ನು ಕೇಂದ್ರೀಕರಿಸುತ್ತಾರೆ. ಹೀಗಾಗಿ, ಬಾಲಸುಬ್ರಮಣಿಯನ್ ಚೋಳ ಇತಿಹಾಸ ಮತ್ತು ಅವು ರೂಪಿಸಿದ ದೇಗುಲ-ಕೇಂದ್ರಿತ ಸಂಪ್ರದಾಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದಾರೆ.

ಕುಡವಾಯಿಲ್ ಬಾಲಸುಬ್ರಮಣಿಯನ್

ಬೃಹತ್ ದೇಗುಲಗಳ ಪರಂಪರೆ

ತಮಿಳುನಾಡಿನಲ್ಲಿ ಒಂದರಲ್ಲೇ ಇಪ್ಪತ್ತಕ್ಕೂ ಹೆಚ್ಚು ಪ್ರಮುಖ ದೇವಾಲಯಗಳಿದ್ದು ಅವು ಸಾಂಸ್ಕೃತಿಕ ವೈವಿಧ್ಯದ ಕೇಂದ್ರಗಳಾಗಿವೆ. ಮಧುರೈ, ಶ್ರೀರಂಗಂ, ಕಾಂಚಿಪುರಂ, ತಿರುನೆಲ್ವೇಲಿ, ಸುಚೀಂದ್ರಂ ಮತ್ತು ವೈದೀಶ್ವರನ್ ಕೋಯಿಲ್‌ನಲ್ಲಿರುವ ಬೃಹತ್ ದೇಗುಲ ಸಂಕೀರ್ಣಗಳು ಏಳನೇ ಶತಮಾನದಿಂದ ಹದಿನೆಂಟನೇ ಶತಮಾನದವರೆಗೆ ಹಂತಗಳಲ್ಲಿ ನಿರ್ಮಿತವಾಗಿ ನವೀಕರಿಸಲ್ಪಟ್ಟಿವೆ.ಒಂದೇ ದೇಗುಲದಲ್ಲಿ ಪ್ರಾಚೀನ ಪಲ್ಲವ ವಾಸ್ತುಶಿಲ್ಪದೊಂದಿಗೆ ಇತ್ತೀಚಿನ ಚೆಟ್ಟಿಯಾರರ ವಾಸ್ತುಶಿಲ್ಪದ ಸೇರ್ಪಡೆಗಳಿದ್ದು ತಮಿಳು ರಾಜರು, ಹೊಯ್ಸಳರು, ವಿಜಯನಗರದ ಅರಸರು ಸಹ ಅವುಗಳ ನಿರ್ಮಾಣಕ್ಕೆ ಪ್ರೋತ್ಸಾಹಿಸಿದ್ದು ಬ್ರಿಟೀಷರು ಆಭರಣಗಳನ್ನು ದೇಗುಲಗಳಿಗೆ ನೀಡಿದ್ದಾರೆ.

ಶ್ರೀರಂಗಂ ಮುಖ್ಯ ಗೋಪುರ

ಈ ದೇವಾಲಯಗಳು ವರ್ಷಪರ್ಯಂತ ಉತ್ಸವಗಳನ್ನು ಆಯೋಜಿಸುತ್ತಿದ್ದು , ವಿಶಿಷ್ಟ ಆಚರಣೆಗಳ ಮೂಲಕ ಸಂಸ್ಕೃತಿಯನ್ನು ಜೀವಂತವಾಗಿಟ್ಟಿವೆ. ಮಧುರೈನ ಮೀನಾಕ್ಷಿ ದೇವಸ್ಥಾನ ಮತ್ತು ಶ್ರೀರಂಗಂನ ರಂಗನಾಥ ದೇವಸ್ಥಾನದಲ್ಲಿ, ಪ್ರತಿ ತಿಂಗಳು ಒಂದೊಂದು ವಿಶಿಷ್ಟ ಆಚರಣೆಗಳಿವೆ. ಇಲ್ಲಿನ ಸೂಕ್ಷ್ಮ ಕೆತ್ತನೆಗಳು ಹಾಗೂ ಸ್ಥಂಭಗಳ ಮೇಲಿನ ಕುಸುರಿಯು ಐತಿಹಾಸಿಕ ಮತ್ತು ಸಾಂಸ್ಕೃತಿಕ ಕುರುಹುಗಳಾಗಿವೆ. ಶಾಸನಗಳ, ಕೆತ್ತನೆಗಳು, ಚಿತ್ರವರ್ಣಿಕೆಗಳ ಮೂಲಕ ಈ ದೇಗುಲಗಳ ಸಾಂಸ್ಕೃತಿಕ ಚರಿತ್ರೆಯು ಸಮ್ಮಿಳಿತವಾಗಿದೆ.

ತಮಿಳಿನಲ್ಲಿ ಬೃಹತ್ ದೇವಾಲಯ ಸಮುಚ್ಚಯದ ಬಗ್ಗೆ ಇಬ್ಬರು ಪ್ರಮುಖ ವಿಧ್ವಾಂಸರು ಗಮನಾರ್ಹ ಅಧ್ಯಯನಗಳನ್ನು ಕೈಗೊಂಡಿದ್ದಾರೆ. ಮೊದಲನೆಯವರಾದ ಎ.ಕೆ.ಪೆರುಮಾಳ್, ಮಾರ್ಕ್ಸ್ ವೈಧಾನಿಕತೆ (ಅಂದಿನ ಜನಜೀವನದ ಇತಿಹಾಸನ್ನು ಆರ್ಥಿಕ ಪರಿಸ್ಥಿತಿ ಮತ್ತು ವರ್ಗಹೋರಾಟದ ನೆಲೆಯಲ್ಲಿ ಗಮನಿಸುವ ಒಂದು ವಿಧಾನ ) ಚೌಕಟ್ಟನ್ನು ಬಳಸಿಕೊಂಡು ಸುಚೀಂದ್ರಂ ಮತ್ತು ತಿರುವಟ್ಟಾರು ದೇವಾಲಯ ಸಂಕೀರ್ಣಗಳ ಮೇಲೆ ತಮ್ಮ ಸಂಶೋಧನೆಯನ್ನು ನಡೆಸಿದ್ದಾರೆ. ಎರಡನೆಯವರಾದ ಕುಡವಾಯಿಲ್ ಬಾಲಸುಬ್ರಮಣಿಯನ್, ಯುನೆಸ್ಕೋ ಪಾರಂಪರಿಕ ತಾಣವಾದ ತಂಜಾವೂರು, ಗಂಗೈಕೊಂಡ ಚೋಳಪುರಂ ಮತ್ತು ತಾರಾಸುರಂನಲ್ಲಿರುವ ಗ್ರೇಟ್ ಲಿವಿಂಗ್ ಚೋಳ ದೇವಾಲಯಗಳು ಹಾಗೂ ತಿರುವಾರೂರಿನ ದೇವಾಲಯದ ಬಗ್ಗೆ ಪ್ರತ್ಯೇಕ ಪ್ರಬಂಧಗಳನ್ನು ರಚಿಸಿದ್ದಾರೆ. ಅವರ ಪ್ರತಿಯೊಂದು ಕೃತಿಗಳು ದೇವಾಲಯದ ಶಿಲ್ಪಗಳು, ಭಿತ್ತಿಚಿತ್ರಗಳು ಮತ್ತು ವಾಸ್ತುಶಿಲ್ಪದ ರೂಪಗಳ ಸೂಕ್ಷ್ಮ ಒಳನೋಟಗಳನ್ನು ನೀಡುತ್ತವೆ, ಜೊತೆಗೆ ಅವುಗಳ ಕಲಾತ್ಮಕ ಸೌಂದರ್ಯ , ಐತಿಹಾಸಿಕ ಪದರಗಳು, ಪುರಾಣದೊಂದಿಗಿನ ಸಂಬಂದಗಳನ್ನು ತಳುಕು ಹಾಕುತ್ತವೆ.ಮತ್ತು ತಾತ್ವಿಕ ಸಾತತ್ಯವನ್ನು ಒಳಗೊಂಡಿರುತ್ತವೆ.

ಬಾಲಸುಬ್ರಮಣಿಯನ್ ಅವರ ಪುಸ್ತಕವಾದ ತಮಿಳಿನ ಗೋಪುರ ಕಲೆಯ ಪರಂಪರೆ (ತಮಿಳಗ ಗೋಪುರಕಲೈ ಮರಬು) ನಲ್ಲಿ ದೇಗುಲಗಳ ಗೋಪುರಗಳ ನಿರ್ಮಾಣವು ಐತಿಹಾಸಿಕವಾಗಿ ನಡೆದುಬಂದ ಹಾದಿ , ವಿಕಸಿತವಾದ ಬಗೆಯನ್ನು ವಿವರಿಸುತ್ತಾರೆ . (ಗೋಪುರಗಳೆಂದರೆ ವರ್ಣರಂಜಿತವಾದ ಕಲಾತ್ಮಕ ಕೆತ್ತನೆಗಳು ಉಳ್ಳ ಮುಖ್ಯ ದೇವಸ್ಥಾನದ ಎದುರಿಗೆ ಇರುವ ರಚನೆಗಳಾಗಿದ್ದು ಇವು ದಕ್ಷಿಣಭಾರತದ ವಾಸ್ತುಶಿಲ್ಪದ ಮುಖ್ಯ ಲಕ್ಷಣವಾಗಿದೆ). ಇವುಗಳು ಗಗನಚುಂಬಿ ರಚನೆಗಳಾಗಿದ್ದು ವಾಸ್ತುಶಿಲ್ಪದಲ್ಲಿ ಐತಿಹಾಸಿಕ ಪದರಗಳನ್ನು ತಿಳಿಸುತ್ತವೆ.

ಇವರು ಗೋಪುರಗಳಲ್ಲಿ ಕೆತ್ತಿರುವ ಭರತನಾಟ್ಯದ 108 ಕರಣಗಳನ್ನು (ಶಾಸ್ತ್ರೀಯ ಭಾರತೀಯ ನೃತ್ಯದಲ್ಲಿನ 108 ಪ್ರಮುಖ ಪರಿವರ್ತನೆಗಳು), ನಾಯಕರ ಕಾಲದ ಭಿತ್ತಿಚಿತ್ರಗಳು, ಒಂದು ದೇವಾಲಯದಿಂದ ಇನ್ನೊಂದಕ್ಕೆ ಸ್ಥಳಾಂತರಗೊಂಡ ಗೋಪುರಗಳು ಹಾಗೂ ಆಕ್ರಮಣದ ಸಮಯದಲ್ಲಿ ಗೋಪುರದಿಂದ ಜನರು ಪಲಾಯನಗೈದ ಘಟನೆಗಳನ್ನು ಒಗ್ಗೂಡಿಸಿ ಪ್ರಸ್ತುತ ಪಡಿಸಿದ್ದಾರೆ.

ಶ್ರೀರಂಗಂ

ಅವರ ಪುಸ್ತಕಗಳು ಪ್ರಸಿದ್ಧ ದೇವಾಲಯಗಳ ಕಡೆಗಣಿಸಲ್ಪಟ್ಟ ಆವೃತ್ತಿಗಳನ್ನು ನಮಗೆ ಕಾಣಿಸುತ್ತದೆ. ಸಾಮಾನ್ಯ ಸಂಶೋಧನಾ ಕೃತಿಗಳಿಗಿಂತ ಭಿನ್ನವಾಗಿ, ಬಾಲಸುಬ್ರಮಣಿಯನ್ ಅವರ ಕೃತಿಯು ಸೌಂದರ್ಯಶಾಸ್ತ್ರದ ಮೂಲಕ ಕಲೆಯನ್ನು ಒರೆಗೆ ಹಚ್ಚುತ್ತವೆ. ನಿಖರವಾದ ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತದೆ ಮತ್ತು ಅವುಗಳನ್ನು ವ್ಯಾಖ್ಯಾನಾತ್ಮಕ ನಿರೂಪಿಸುತ್ತದೆ. ಚೋಳ ರಾಜನು ಗಂಗಾ ಪ್ರದೇಶವನ್ನು ವಶಪಡಿಸಿಕೊಂಡನೆಂದು ಇತರ ಸಂಶೋಧಕರು ಹೇಳಬಹುದಾದರೂ, ಬಾಲಸುಬ್ರಮಣಿಯನ್ ಆ ಭೂಮಿಯಿಂದ ತಂದ ಶಿಲ್ಪದ ಮೂಲಕ ಆ ಇತಿಹಾಸವನ್ನು ನಿರೂಪಿಸುತ್ತಾರೆ, ಇತಿಹಾಸವು ಕಲೆಯ ಮೂಲಕ ನಮ್ಮೊಂದಿಗೆ ಮಾತನಾಡಲು ಅನುವು ಮಾಡಿಕೊಡುತ್ತದೆ.ಅವರು ಕೇವಲ ಶಾಸನಗಳನ್ನು ಓದುತ್ತಾ ಇತಿಹಾಸವನ್ನು ಅರ್ಥೈಸುವುದಿಲ್ಲ ಬದಲಾಗಿ ಆ ಶಿಲ್ಪಗಳಲ್ಲಿನ ಕಲಾತ್ಮಕ ಸೌಂದರ್ಯಗಳ ಬಗ್ಗೆ ಗಮನಹರಿಸುತ್ತಾರೆ. ಕುಡವಾಯಿಲ್ ಬಾಲಸುಬ್ರಮಣಿಯನ್ ತಮಿಳುನಾಡಿನ ಬೃಹತ್ ದೇವಾಲಯಗಳನ್ನು ಕಠಿಣ ಐತಿಹಾಸಿಕ ಅಥವಾ ಸಾಮಾಜಿಕ ಚೌಕಟ್ಟುಗಳ ಮೂಲಕ ಅಲ್ಲ, ಆದರೆ ಅವುಗಳ ಜೀವಂತ ಅಂಶಗಳ ಮೂಲಕ - ಶಿಲ್ಪಕಲೆ, ಚಿತ್ರಕಲೆ ಮತ್ತು ಸಾಂಪ್ರದಾಯಿಕ ಉತ್ಸವಗಳ ಮೂಲಕ ಸಮೀಪಿಸುತ್ತಾರೆ. ಇವರ ಕೃತಿಗಳು ಸೌಂದರ್ಯಶಾಸ್ತ್ರವನ್ನು ಕೇಂದ್ರದಲ್ಲಿಟ್ಟುಕೊಂಡು ಓದುಗರಿಗೆ ದೇಗುಲಗಳ ಸಂಸ್ಕೃತಿ, ವೈಭವಗಳ ಅನುಭವವನ್ನು ಕಟ್ಟಿಕೊಡುತ್ತವೆ

ಬಾಲಸುಬ್ರಮಣಿಯನ್ ಅವರ ಕೃತಿಗಳನ್ನು ಕದಂಬ ಮಾಲೆಗೆ ಹೋಲಿಸಬಹುದು. ಚೋಳರ ಕಾಲದಲಿ, ಬಣ್ಣದ ಸುಕೋಮಲ ಕದಂಬ ಹೂವುಗಳಿಂದ ಹೆಣೆಯಲ್ಪಟ್ಟ ಮಾಲೆಯನ್ನು ಶ್ರೀರಂಗದ ನಂಪೆರುಮಾಳ್( ಉತ್ಸವ ಮೂರ್ತಿ) ನ ತುರುಬಿಗೆ ಧರಿಸುವ ಮಾಲೆಯದು. ಬಾಲಸುಬ್ರಮಣಿಯನ್ ತಮ್ಮ ಬರವಣಿಗೆಗೆ ತರುವ ಸೌಂದರ್ಯವು ಅಂತಹದು: ಆಯ್ದ ಹಲವು ಅಂಶಗಳನ್ನು ಒಂದೇ ಆಶಯಕ್ಕೆ ಒಟ್ಟುಗೂಡಿಸುವ ಕಲೆ. ಇದು ಶಬರಿ ರಾಮನಿಗೆ ಅರ್ಪಿಸಿದ ನೈವೇದ್ಯವನ್ನು ಸಹ ನೆನಪಿಸುತ್ತದೆ – ಅದು ಮೃಷ್ಟಾನ್ನವಲ್ಲ ಆದರೆ ಪ್ರೀತಿ ಕಾಳಜಿಯಿಂದ ಆರಿಸಿದ ಹಣ್ಣುಗಳ ನಿವೇದನೆ ಇದ್ದಂತೆ.

Lord Namperumal of Srirangam and Kadambam Garland

ಸಂಶೋಧನಾ ಕೃತಿಗಳು - ವ್ಯಕ್ತಿಗಳು ಮತ್ತು ರಾಜವಂಶಗಳು

ದೇವಾಲಯಗಳು, ಅವುಗಳ ಶಿಲ್ಪಗಳು ಮತ್ತು ವರ್ಣಚಿತ್ರಗಳು, ಭಕ್ತಿ ಸಾಹಿತ್ಯ, ಶಾಸನಗಳು ಮತ್ತು ಅಪರೂಪದ ಗ್ರಂಥಗಳನ್ನು ಪತ್ತೆಹಚ್ಚುವ ಮತ್ತು ಹೆಣೆಯುವ ಮೂಲಕ, ಬಾಲಸುಬ್ರಮಣಿಯನ್ ಹಲವಾರು ಆವಿಷ್ಕಾರಗಳನ್ನು ಮಾಡಿದ್ದಾರೆ. ಅತ್ಯಂತ ಗಮನಾರ್ಹವಾದವುಗಳಲ್ಲಿ ಚೋಳರ ಐತಿಹಾಸಿಕ ವ್ಯಕ್ತಿಗಳ ದಾಖಲೀಕರಣ, ಶಿಲ್ಪಗಳು, ವರ್ಣಚಿತ್ರಗಳು ಮತ್ತು ತಾಮ್ರ ಫಲಕದ ಸನ್ನದುಗಳ ಮೂಲಕ ಚೋಳ, ನಾಯಕ ಮತ್ತು ಮರಾಠಾ ಆಡಳಿತಗಾರರ ಚಿತ್ರಗಳನ್ನು ನಿರೂಪಿಸಿದ್ದಾರೆ. ಅವರು ರಾಜೇಂದ್ರ ಚೋಳನ ಬಗ್ಗೆ , ಸೇನಾಧಿಪತಿ ಕರುಣಾಕರ ತೊಂಡೈಮಾನ್ ಮತ್ತು ಅರಸ ಕೊನೆರಿರಾಯನ್ ಬಗ್ಗೆ ಆಳವಾಗಿ ಬರೆದಿದ್ದಾರೆ. ಮುಖ್ಯವಾಗಿ, ಅವರು ತಂಜಾವೂರು ನಾಯಕ ರಾಜವಂಶದ ತಮಿಳಿನಲ್ಲಿ ಮೊದಲ ರಚನಾತ್ಮಕ ಅಧ್ಯಯನವನ್ನು ನಿರ್ಮಿಸಿದ್ದಾರೆ, ಇದು ಸಮಗ್ರ ರೂಪದಲ್ಲಿ ಇದುವರೆಗೂ ಅನ್ವೇಷಿಸದ ವಿಷಯವಾಗಿದೆ.

ಕುಡವಾಯಿಲ್ ಬರೆದ ತಂಜಾವೂರಿನ ನಾಯಕ್ ಇತಿಹಾಸ

ಬಾಲಸುಬ್ರಮಣಿಯನ್ ಕಲಾ ಜಗತ್ತಿನ ವ್ಯಕ್ತಿಗಳ ಜೀವನ ಚಿತ್ರಣವನ್ನು ಸಹ ದಾಖಲಿಸಿದ್ದಾರೆ. ಐತಿಹಾಸಿಕ ವ್ಯಕ್ತಿಗಳು ಮತ್ತು ಸಮಕಾಲೀನ ಕಲಾವಿದರನ್ನು ಸಮಾನ ಕಾಳಜಿಯಿಂದ ಚಿತ್ರಿಸಿದ್ದಾರೆ. ಉದಾಹರಣೆಗೆ, ಅವರು ತಿರುವಾರೂರಿನಲ್ಲಿರುವ ದೇವಾಸಿರಿಯನ್ ಮಂಟಪದ ಭಿತ್ತಿಚಿತ್ರಗಳ ಹದಿನೇಳನೇ ಶತಮಾನದ ವರ್ಣಚಿತ್ರ ಸಿಂಗಾಥನಂ ( ಸಿಂಹಾಸನ )ನ ಕಲಾವಿದ ಹಾಗೂ ಕುಡಮುಳಾ ಎಂಬ ಪಂಚಮುಖ ವಾದ್ಯ ನುಡಿಸುವ ಮುತ್ತುಕ್ಕಾರರ್ ವಂಶದ ಸಮಕಾಲೀನ ಕಲಾವಿದ ಶಂಕರಮೂರ್ತಿ ಅವರನ್ನು ದಾಖಲಿಸಿದ್ದಾರೆ.

ಪಠ್ಯ ಮೂಲಗಳು, ಸಾಹಿತ್ಯ, ಅಪರೂಪದ ಪುಸ್ತಕಗಳು

ಕುಡವಾಯಿಲ್ ಬಾಲಸುಬ್ರಮಣಿಯನ್ ಶೈವ ಪಠ್ಯ ಸಂಗ್ರಹವಾದ ಹನ್ನೆರಡು ಪೂಜನೀಯ ಶೈವ ಗ್ರಂಥಗಳು (ಪನ್ನಿರು ತಿರುಮುರೈಗಳ್) ನೊಂದಿಗೆ ಅವರ ಸಂಶೋಧನೆಯು ತೇವಾರಂ, ತಿರುಮಂದಿರಂ, ತಿರುಕೈಲಾಯ ಉಲಾ ಮತ್ತು ಪೆರಿಯ ಪುರಾಣದಂತಹ ಕೃತಿಗಳನ್ನು ವ್ಯಾಪಕವಾಗಿ ಆಧರಿಸಿದೆ, ಈ ಪಠ್ಯಗಳು ಅವರ ವಿಶ್ಲೇಷಣೆ ಮತ್ತು ವ್ಯಾಖ್ಯಾನಗಳ ಕೇಂದ್ರಬಿಂದುಗಳು.

ಇದರಲ್ಲಿ ಹನ್ನೆರಡು ಪೂಜನೀಯ ಶೈವ ಗ್ರಂಥದ ಮೊದಲ ಸಂಕಲನವಾದ ತೇವಾರಂ, ಶೈವ ಸಂತರಾದ ತಿರುಜ್ಞಾನಸಂಬಂದರ್, ತಿರುನಾವುಕ್ಕರಸರ್ ಮತ್ತು ಸುಂದರರ್ ಅವರ ಸ್ತೋತ್ರಗಳನ್ನು ಒಳಗೊಂಡಿದೆ. ಈ ಕವಿತೆಗಳನ್ನು ಏಳು ಮತ್ತು ಎಂಟನೇ ಶತಮಾನಗಳಲ್ಲಿ ರಚಿಸಲಾಗಿದೆ, ಆ ಅವಧಿಯಲ್ಲಿ ತಮಿಳಿನಲ್ಲಿ ಭಕ್ತಿ ಚಳುವಳಿ ಬೇರೂರುತ್ತಾ ಮತ್ತು ಪ್ರವರ್ಧಮಾನಕ್ಕೆ ಬರುತ್ತಿತ್ತು.

Saivite saints : Navukarasar, Sundharar, Gnana Sambanthar, Manikka Vasakar 
ಕುಡವಾಯಿಲ್ ಬಾಲಸುಬ್ರಮಣಿಯನ್ ಅವರ ಪುಸ್ತಕ (‘ತೇವಾರ ಮಾಣ್ ಬುಮ್ ಓದುವಾರ್ ಮರಬುಮ್’) ತೇವಾರಂ ಹಸ್ತಪ್ರತಿ ಸಂಪ್ರದಾಯದ ಕೃತಿ ಈ ಕುರಿತು ಅವರು ಸಂಶೋಧನೆಯನ್ನು ಕೈಗೊಂಡಿದ್ದಾರೆ. ತೇವಾರಂ ಎಂಬ ಪದದ ಮೂಲ, ಅದರ ಪಠಣದ ಇತಿಹಾಸ ಮತ್ತು ಸಂಗೀತ ಪೂಜೆ, ಸಂಬಂಧಿತ ಶಾಸನಗಳು, ಸಂಕಲನ ವಿಧಾನಗಳು ಮತ್ತು ಶಾಸ್ತ್ರದಲ್ಲಿ ಹೆಸರಿಸಲಾದ ದೇವಾಲಯಗಳನ್ನು ಒಳಗೊಂಡಿದೆ.

ಇವರು ಪೆರಿಯ ಪುರಾಣಂ ನ ಜೊತೆಗೆ ತೇವಾರಂ ನು ಹೋಲಿಸಿ ಅದರ ಮೂಲಕ ಕಳೆದುಹೋದ ಪದಿಗಂ( ಹತ್ತು ಹಾಡುಗಳ ಸಂಗ್ರಹ) ಗಳ ಮರುಹುಡುಕಾಟ ನಡೆಸುತ್ತಾರೆ. ದೇವಾಲಯಗಳಲ್ಲಿ ತೇವಾರಂ ಅನ್ನು ಹಾಡಿ ಸಂರಕ್ಷಿಸುವಲ್ಲಿ ಮಹತ್ವದ ಪಾತ್ರವಹಿಸಿದ ಓದುವಾರ್ ಸಮುದಾಯಗಳನ್ನು ಗುರುತಿಸುತ್ತಾರೆ.

ತಮಿಳಿನಲ್ಲಿ, ಅರವತ್ತಮೂರು ಶೈವ ಸಂತರಾದ ನಾಯನಾರ್‌ಗಳ ಜೀವನವನ್ನು ನಿರೂಪಿಸುವ ಜೀವನ ಚರಿತ್ರೆಯ ಕೃತಿಯನ್ನು ಪೆರಿಯ ಪುರಾಣಂ ಎಂದು ಕರೆಯಲಾಗುತ್ತದೆ, ಇದನ್ನು ತಿರುತ್ತೊಂಡರ್ ಪುರಾಣಂ ಎಂದೂ ಕರೆಯುತ್ತಾರೆ. ಹನ್ನೆರಡನೇ ಶತಮಾನದಲ್ಲಿ ರಚಿಸಲಾದ ಇದು ಭಕ್ತರ ಜೀವನವನ್ನು ವಿವರಿಸುತ್ತದೆ. ಬಾಲಸುಬ್ರಮಣಿಯನ್ ಅವರು ಇದನ್ನು ತಾರಾಸುರಂನ ಕೆತ್ತನೆಗಳಲ್ಲಿ ಕಂಡು ಹಿಡಿದಿದ್ದಾರೆ. ಮೂರು ತೇವಾರಂ ಕವಿಗಳಲ್ಲಿ ಸುಂದರರ್ ಮೊದಲು ಸಂಕಲಿಸಿದರು, ಮತ್ತು ಪೆರಿಯ ಪುರಾಣವು ತಿರುತೊಂಡರ ಪುರಾಣದ ನಿರೂಪಣೆಯೊಂದಿಗೆ ಪ್ರಾರಂಭವಾಗುತ್ತದೆ, ತಾರಾಸುರಂನಲ್ಲಿ, ಶಿಲ್ಪಕಲೆ ಫಲಕಗಳು ಪಠ್ಯದಲ್ಲಿ ವಿವರಿಸಿದ ಅದೇ ಅನುಕ್ರಮವನ್ನು ಅನುಸರಿಸುತ್ತವೆ. ಸುಂದರರ್, ತಿರುಜ್ಞಾನಸಂಬಂದರ್ ಮತ್ತು ತಿರುನಾವುಕ್ಕರಸರ್ ಅವರ ಜೀವನವನ್ನು ಹಲವಾರು ಫಲಕಗಳ ಮೂಲಕ ಸಮೃದ್ಧವಾಗಿ ಚಿತ್ರಿಸಲಾಗಿದೆ, ಆದರೆ ಇತರ ನಾಯನಾರ್ ಗಳ ಜೀವನವು ಸೂಕ್ಷ್ಮ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಬಾಲಸುಬ್ರಮಣಿಯನ್ ತಮ್ಮ ತಾರಾಸುರಂ ಪುಸ್ತಕದಲ್ಲಿ ಸಾಹಿತ್ಯ, ಶಿಲ್ಪಕಲೆ ಮತ್ತು ಪುರಾಣ ಸಂಪ್ರದಾಯವು ಹೇಗೆ ಒಮ್ಮುಖವಾಗುತ್ತದೆ ಮತ್ತು ವೀರಶೈವ ಸಂಪ್ರದಾಯ ಸೇರಿದಂತೆ ದಕ್ಷಿಣ ಭಕ್ತಿ ಚಳುವಳಿಗಳಲ್ಲಿ ನಾಯನಾರ್ ಪರಂಪರೆ ಹೇಗೆ ಹರಡಿತು ಎಂಬುದನ್ನು ಈ ಶಿಲ್ಪಕಲೆಯಿಂದ ವ್ಯಾಖ್ಯಾನಿಸುತ್ತಾರೆ.
Vanasura performs Kudamuzha
ಬಾಲಸುಬ್ರಮಣಿಯನ್ ಅವರು ಅಪರೂಪದ ಮತ್ತು ನಿರ್ಲಕ್ಷಿತ ಪಠ್ಯಗಳನ್ನು ಮತ್ತೆ ವಿದ್ವತ್ಪೂರ್ಣ ಪ್ರಸರಣಕ್ಕೆ ತಂದಿದ್ದಾರೆ. ಅವುಗಳನ್ನು ಮೊದಲ ಬಾರಿಗೆ ಸಂಶೋಧನೆಗೆ ಪರಿಚಯಿಸುತ್ತಿದ್ದಾರೆ. ತಮ್ಮ ಸೇವೆಯ ಸಮಯದಲ್ಲಿ, ಅವರು ಅತಿ ಕಠಿಣವಾದ ಈ ಕೆಲಸವನ್ನು ಮುಂದುವರಿಸಿದ್ದಾರೆ. ಕುಡಮುಳದ ‘ಪಂಚಮುಖ ವಾದ್ಯ ಲಕ್ಷಣಂ’ ನಂತಹ ತಾಳೆಗರಿಯ ಹಸ್ತಪ್ರತಿಗಳನ್ನು ಬಹಿರಂಗಪಡಿಸಿದ್ದಾರೆ. ಗೋಪುರ ಕಲೆಯ ಅಧ್ಯಯನದಲ್ಲಿ ತಾಳ ದೀಪಿಕಾ ಎಂಬ ನೃತ್ಯ ಗ್ರಂಥವನ್ನು ಮೂಲವಾಗಿ ಬಳಸಿಕೊಂಡಿದ್ದಾರೆ. ಅವರು ನಾಯಕ್ ಮತ್ತು ಮರಾಠಾ ಕಾಲದ ಶಿಲ್ಪ ಮೂಲಗಳನ್ನು ಸಹ ವ್ಯಾಪಕವಾಗಿ ಬಳಸುತ್ತಾರೆ. ‘ತಂಜಾವೂರ್ ನಾಯಕರ್ ವರಲಾರು’( ತಂಜಾವೂರು ನಾಯಕರ ಇತಿಹಾಸ) ಮತ್ತು ‘ಕಲೈಯಿಯಲ್ ರಸನೈ ಕಟ್ಟುರೈಗಲ್‌’ ನಂತಹ ಅವರ ಪುಸ್ತಕಗಳ ಮೂಲಕ, ಅವರು ಆಡಳಿತಗಾರರು, ದೇವಾಲಯ ಉತ್ಸವಗಳು ಮತ್ತು ಪ್ರದರ್ಶನ-ಕಲೆಗಳ ಪಠ್ಯಗಳನ್ನು ಸಮೃದ್ಧವಾಗಿ ದಾಖಲಿಸಿದ್ದಾರೆ. ಬಾಲಸುಬ್ರಮಣಿಯನ್ ತಮಿಳು ಪಠ್ಯಗಳಲ್ಲಿ ಸಾಹಿತ್ಯ ವಿದ್ವಾಂಸರು ಸಹ ಕಡೆಗಣಿಸುವ ಸೂಕ್ಷ್ಮ ವ್ಯತ್ಯಾಸಗಳನ್ನು ಪತ್ತೆಹಚ್ಚಿದ್ದಾರೆ. ಶಿಲ್ಪಕಲೆಯನ್ನು ಗಮನಿಸುವಲ್ಲಿ ಅವರ ದೀರ್ಘ ಅಧ್ಯಯನದಿಂದ ರೂಪುಗೊಂಡ ಒಳನೋಟ ವಿಶಿಷ್ಟ . ಉದಾಹರಣೆಗೆ, ತಮಿಳು ಸಂಪ್ರದಾಯವು ಚಂದ್ರನ ಮೇಲಿನ ಕಪ್ಪು ಗುರುತುಗಳನ್ನು ಮೊಲ ಎಂದು ಕಲ್ಪಿಸುತ್ತದೆ ಮತ್ತು ಬಾಲಸುಬ್ರಮಣಿಯನ್ ಈ ಚಿತ್ರವನ್ನು ಸಾಹಿತ್ಯ ಚರಿತ್ರೆಯಾದ್ಯಂತ ಪತ್ತೆಹಚ್ಚುತ್ತಾರೆ, ಅಗನಾನೂರು ನಂತಹ ಸಂಗಂ ಕೃತಿಗಳಿಂದ ತೇವಾರಂ, ತಿರುವಾಚಕಂ, ಪೆರಿಯ ಪುರಾಣಂ ಮತ್ತು ನಾಲಡಿಯಾರ್ ವರೆಗೆ. ಓಮಂತೂರಿನ ಶಿಲ್ಪಕಲೆಯ ಮೂಲಕ ಸ್ಪಷ್ಟೀಕರಿಸುತ್ತಾರೆ. ಅಲ್ಲಿ ಒಂದು ಸರ್ಪವು ಚಂದ್ರನ ಬಳಿಗೆ ಬರುತ್ತಿರುವುದನ್ನು ಮತ್ತು ಅದರೊಳಗಿನ ಮೊಲವು ಭಯದಿಂದ ಹಿಂದಕ್ಕೆ ಸರಿಯುತ್ತಿರುವುದನ್ನು ಚಿತ್ರಿಸಲಾಗಿದೆ.
ಬಾಲಸುಬ್ರಮಣಿಯನ್ ಅವರು ಬೆಳೆದುಬಂದ ಸಂಪ್ರದಾಯಗಳನ್ನು ವಿಮರ್ಶಾತ್ಮಕವಾಗಿ ಸ್ವೀಕರಿಸುವುದಿಲ್ಲ ಎಂಬುದು ಅವರ ಸಾಮಾನ್ಯ ಚಿತ್ರಣಕ್ಕೆ ವಿರುದ್ಧವಾಗಿದ್ದು ಅವರು ಸತತವಾಗಿ ಪುರಾವೆಗಳನ್ನು ಆಧರಿಸಿದ ಆಕ್ಷೇಪಣೆಗಳು ಮತ್ತು ಪಾಠಾಂತರಗಳನ್ನು ಮುಂದಿಡುತ್ತಾರೆ. ಅವರ ಮೊದಲ ಪ್ರಮುಖ ಅಧ್ಯಯನವಾದ ನಂದಿಪುರಂನಲ್ಲಿ ರಾಜ ರಾಜಧಾನಿ ನಂದಿಪುರತ್ತು ಆಯಿರತ್ತಲಿಯನ್ನು ಗುರುತಿಸುವುದನ್ನು ಪ್ರಶ್ನಿಸಿದ್ದಾರೆ. ಹಿಂದಿನ ವಿದ್ವಾಂಸರು ಪಳೈಯಾರ್ ಬಳಿಯ ನಾಥನ್‌ಕೋವಿಲ್ ನಂದಿಪುರಂ ಎಂದು ದಾಖಲಿಸಿದ್ದರೂ, ಬಾಲಸುಬ್ರಮಣಿಯನ್ ಆ ಸ್ಥಳವು ವಾಸ್ತವವಾಗಿ ಕಂಡಿಯೂರ್ ಬಳಿಯ ವೀರಸಿಂಗಂಪೇಟ್ಟೈ ಎಂದು ಪ್ರತಿಪಾದಿಸಿದ್ದಾರೆ. ಇದರಿಂದಾಗಿ ವಿದ್ವತ್ಪೂರ್ಣ ಒಮ್ಮತವನ್ನು ಮರುರೂಪಿಸಿದ್ದಾರೆ. ಇದನ್ನು ದೃಢೀಕರಿಸಲು, ಬಾಲಸುಬ್ರಮಣಿಯನ್ ತಮ್ಮ ವಿಶ್ಲೇಷಣೆಯಲ್ಲಿ ದೇವಾಲಯ ಸ್ಥಳಾಂತರದ ಪರಿಕಲ್ಪನೆಯನ್ನು ಪರಿಚಯಿಸಿದ್ದಾರೆ. ವಾಸ್ತುಶಿಲ್ಪ ಮತ್ತು ಶಿಲಾಶಾಸನ ಪುರಾವೆಗಳನ್ನು ಬಳಸಿಕೊಂಡು, ಪಲ್ಲಿಪ್ಪಡೈ ದೇವಾಲಯಗಳನ್ನು ನಂತರ ಕಂಡಿಯೂರ್‌ಗೆ ಸ್ಥಳಾಂತರಿಸಲಾಯಿತು ಎಂದು ಅವರು ತೋರಿಸಿದ್ದಾರೆ.

ಅಪ್ಪರ್, ಸಂಬಂದರ್ ಮತ್ತು ಸುಂದರರ್ ಬರೆದ ತೇವಾರಂ ಸ್ತೋತ್ರಗಳ ತಾಳೆಗರಿಯ ಹಸ್ತಪ್ರತಿಗಳು ಬಹಳ ಹಿಂದಿನಿಂದಲೂ ಕಳೆದುಹೋಗಿವೆ ಎಂದೇ ನಂಬಲಾಗಿತ್ತು. ಸಂಪ್ರದಾಯದ ಪ್ರಕಾರ ಅವುಗಳನ್ನು ಚಿದಂಬರಂ ನಟರಾಜ ದೇವಾಲಯದ ರಹಸ್ಯ ಕೋಣೆಯಲ್ಲಿ ಮರೆಮಾಡಲಾಗಿತ್ತು. ಮೂರು ಸಾವಿರ ಪುರೋಹಿತರೊಂದಿಗಿನ ವಿವಾದದ ನಂತರ ರಾಜರಾಜ ಚೋಳನು ಅವುಗಳನ್ನು ವಶಪಡಿಸಿಕೊಂಡನು, ಇದರಿಂದಾಗಿ ಅವನಿಗೆ ‘ತಿರುಮುರೈ ಕಂಡ ಚೋಳನ್’ ಎಂಬ ಬಿರುದು ಬಂದಿತು. ಆದಾಗ್ಯೂ, ಬಾಲಸುಬ್ರಮಣಿಯನ್, ಈ ಕಥೆಯು ಉಮಾಪತಿ ಶಿವಂ ಅವರ ಪುರಾಣದಲ್ಲಿ ಮಾತ್ರ ಹುಟ್ಟಿಕೊಂಡಿದೆ ಮತ್ತು ದೃಢವಾದ ಐತಿಹಾಸಿಕ ಪುರಾವೆಗಳ ಕೊರತೆಯಿಂದಾಗಿ ಶೀರ್ಷಿಕೆಯನ್ನು ನಿರ್ಣಾಯಕ ದೃಷ್ಟಿಕೋನದಿಂದ ಸಮರ್ಥನೀಯವಲ್ಲ ಎಂದು ತೋರಿಸುತ್ತಾರೆ. ಚೋಳ ರಾಜಕುಮಾರ ಆದಿತ್ಯ ಕರಿಕಾಲನ ಹತ್ಯೆಯ ಬಗೆಗಿನ ಇತಿಹಾಸವು ಕೇವಲ ಊಹೆಗಳಿಂದ ತುಂಬಿದ್ದು ಕೆಲವರು ಅವರ ಉತ್ತರಾಧಿಕಾರಿಗಳಾದ ಉತ್ತಮ ಚೋಳ ಮತ್ತು ರಾಜರಾಜರ ಮೇಲೆ ಅನುಮಾನ ವ್ಯಕ್ತಪಡಿಸುತ್ತಾರೆ. ಹೆಚ್ಚು ಉಲ್ಲೇಖಿಸಲಾದ ಉಡೈಯಾರ್ಕುಡಿ ಶಾಸನವನ್ನು ಮರುಪರಿಶೀಲಿಸುವ ಮೂಲಕ, ಬಾಲಸುಬ್ರಮಣಿಯನ್ ಈ ವಾದವನ್ನು ಸೋಲಿಸುತ್ತಾರೆ ಮತ್ತು ಅಂತಹ ಅನುಮಾನಗಳು ಯಾವುದೇ ದೃಢವಾದ ಐತಿಹಾಸಿಕ ಆಧಾರದ ಮೇಲೆ ನಿಂತಿಲ್ಲ ಎಂದು ತೋರಿಸುತ್ತಾರೆ.

ಶಿಲ್ಪಕಲೆ ಅಧ್ಯಯನದ ಐತಿಹಾಸಿಕ ಅನಿವಾರ್ಯತೆ

ತಮಿಳುನಾಡಿನ ಲೋಹ-ಎರಕಹೊಯ್ದ ಶಿಲ್ಪಗಳನ್ನು ಅವುಗಳ ಸೌಂದರ್ಯದ ಕುರುಹಾಗಿ ಪ್ರಪಂಚದಾದ್ಯಂತ ಆರಾಧಿಸಲಾಗುತ್ತದೆ.ಈ ಶಿಲ್ಪಗಳು ಬಾಲಸುಬ್ರಮಣಿಯನ್ ಅವರ ಆಸಕ್ತಿಯ ವಿಷಯ . ಇತಿಹಾಸಕ್ಕೂ ಶಿಲ್ಪಕ್ಕೂ ಏನು ಸಂಬಂಧ ಎಂದು ಯಾರಾದರು ಕೇಳಿದರೆ ಕುಡವಾಯಿಲ್ ಅವರ ಕೆಲಸವು ಅದಕ್ಕೆ ಉತ್ತರವನ್ನು ನೀಡುತ್ತದೆ. ಚೋಳ ಚಕ್ರವರ್ತಿ ರಾಜರಾಜನ ಶಿಲ್ಪವನ್ನು ತಮಿಳುನಾಡಿನಿಂದ ಹೊರಗೆ ತಂದಾಗ, ಶಿಲ್ಪದ ಗಾತ್ರ ಮತ್ತು ತೂಕವನ್ನು ಸಹ ದಾಖಲಿಸುವ ದೇವಾಲಯದ ಶಾಸನಗಳು ದೇವಾಲಯದ ಪೋಷಕ ರಾಜನ ಪ್ರತಿಮೆಯನ್ನು ಮೂಲತಃ ಅಲ್ಲಿ ಸ್ಥಾಪಿಸಲಾಗಿದೆ ಎಂದು ದೃಢೀಕರಿಸುತ್ತವೆ. ಅದು ಹಿಂದಿರುಗುವ ಮೊದಲು, ಶಿಲ್ಪದ ಸತ್ಯಾಸತ್ಯತೆಯನ್ನು ಸಾಬೀತುಪಡಿಸಬೇಕಾದಾಗ. ಪರಿಶೀಲನಾ ತಂಡದೊಂದಿಗೆ ಸೇರಿಕೊಂಡ ಬಾಲಸುಬ್ರಮಣಿಯನ್ ಶಿಲ್ಪವನ್ನು ಪರೀಕ್ಷಿಸಿ , ಶಿಲಾಶಾಸನದ ಪುರಾವೆಗಳ ಮೂಲಕ ಪರಿಶೀಲಿಸಿ ಮತ್ತು ತಂಜಾವೂರಿಗೆ ಮರಳಿ ತರುವ ಹಾಗೆ ಮಾಡಿದ್ದಾರೆ.
Statues of King Rajaraja and his wife Logamadevi
ಮತ್ತೊಂದೆಡೆ ವಿಶ್ವದಾದ್ಯಂತ ವಿದ್ವಾಂಸರಿಂದ ಪೂಜಿಸಲ್ಪಡುವ ತಿರುವಾಚಕಂನ ಲೇಖಕರಾದ ಶೈವ ಸಂತ ಮಾಣಿಕ್ಯವಾಸಗರ್ ಅವರ ಸುತ್ತ ದೀರ್ಘಕಾಲದ ಚರ್ಚೆ ನಡೆಯುತ್ತಿರುವಾಗ ಅವರ ಕೃತಿ ತಿರುಕ್ಕೋವೈಯಾರ್, ಪ್ರೇಮದ ಔನ್ನತ್ಯವಿರುವ ಆಗಮ ಸಂಪ್ರದಾಯಕ್ಕೆ ಸೇರಿದ ಕಾವ್ಯ ಅಲ್ಲಿ ಶಿವನು ಪ್ರಿಯತಮನಾಗಿ ಕಾಣಿಸಿಕೊಳ್ಳುತ್ತಾನೆ ಇಲ್ಲಿ ಭಕ್ತಿಯು ಪ್ರೀತಿಯ ಭಾಷೆಯಲ್ಲಿ ತೆರೆದುಕೊಳ್ಳುತ್ತದೆ. ಈ ಸೌಂದರ್ಯದ ಕಾರಣದಿಂದಾಗಿ, ಕೆಲವು ವಿದ್ವಾಂಸರು ಮಾಣಿಕ್ಯವಾಸಗರ್ ಅವರು ಈ ಕೃತಿಯ ಲೇಖಕರಲ್ಲ ಎಂದು ಹೇಳುವುದನ್ನು ನಿರಾಕರಿಸಿದ್ದಾರೆ, ಅತೀವ ಭಕ್ತಿಯುಳ್ಳ ಕವಿಯು ದೈವಿಕತೆಯನ್ನು ಮೀರಿ ಪ್ರೇಮ ಕಾವ್ಯವನ್ನು ರಚಿಸಲು ಸಾಧ್ಯವಿಲ್ಲ ಎಂದು ವಾದಿಸಿದ್ದಾರೆ.

Saint Manikka Vasagar
ಅದಕ್ಕೆ ಕುಡವಾಯಿಲ್ ಬಾಲಸುಬ್ರಮಣಿಯನ್ ಈ ಪ್ರಶ್ನೆಯನ್ನು ಶಿಲ್ಪದ ಮೂಲಕ ಪರಿಹರಿಸಿದ್ದಾರೆ. ಮಾಣಿಕ್ಯವಾಸಗರ್ ಅವರ ಚಿತ್ರಗಳು ಸಾಂಪ್ರದಾಯಿಕವಾಗಿ ಅವರು ತಾಳೆಗರಿಯ ಹಸ್ತಪ್ರತಿಯನ್ನು ಹಿಡಿದಿರುವುದನ್ನು ತೋರಿಸುತ್ತವೆ. ಅಂತಹ ಮುಖ್ಯ ವ್ಯಕ್ತಿಗಳ ಅಧ್ಯಯನದಲ್ಲಿ, ಬಾಲಸುಬ್ರಮಣಿಯನ್ ಒಂದು ಶಿಲ್ಪವು ಶಾಸನವನ್ನು ಹಿಡಿದಿರುವುದನ್ನು ಎಂದು ಗಮನಿಸಿದ್ದಾರೆ, ಅದನ್ನು ಅವರು ತಿರುಕ್ಕೋವೈಯಾರ್‌ನ ಆರಂಭಿಕ ಸಾಲು ಎಂದು ಗುರುತಿಸಿದ್ದಾರೆ.ಅದು ಶತಮಾನಗಳಿಂದ ಪೂಜಿಸಲ್ಪಟ್ಟ ಚೋಳರ ಕಾಲದ ಪ್ರತಿಮೆ, ಹೀಗಾಗಿ ಸ್ವತಃ ಐತಿಹಾಸಿಕ ಪುರಾವೆಯಾಗುತ್ತದೆ: ತಿರುಕ್ಕೋವೈಯಾರ್ ಅನ್ನು ನಿಜವಾಗಿ ಮಾಣಿಕ್ಯವಾಸಗರ್ ರಚಿಸಿದ್ದಾರೆ.

ಕುಡವಾಯಿಲ್ ಬಾಲಸುಬ್ರಮಣಿಯನ್

 ಧರ್ಮಗಳ ಬಗ್ಗೆ ಒಂದು ದೃಷ್ಟಿಕೋನ

ಕುಡವಾಯಿಲ್ ಬಾಲಸುಬ್ರಮಣಿಯನ್ ಅವರು ಮುಖ್ಯವಾಗಿ ಕಲ್ಲು, ಕಂಚು ಮತ್ತು ಚಿತ್ರಕಲೆಯ , ಶಿಲ್ಪಕಲೆಯ ಮೂಲಕ ಧರ್ಮವನ್ನು ಸಮೀಪಿಸಿದ್ದಾರೆ, ಅವರು ಶಿವನ ಹಲವು ರೂಪಗಳು, ಅವುಗಳ ನೋಟಗಳು ಮತ್ತು ಅವುಗಳ ಐತಿಹಾಸಿಕ ರೂಪಾಂತರಗಳನ್ನು ಪತ್ತೆಹಚ್ಚುತ್ತಾರೆ. ತಮಿಳುನಾಡಿನಲ್ಲಿ ಎಲ್ಲಿಯಾದರೂ ಉತ್ತಮ ಶಿಲ್ಪ ಅಸ್ತಿತ್ವದಲ್ಲಿದ್ದರೆ, ಕುಡವಾಯಿಲ್ ಅದನ್ನು ತಮ್ಮ ಬರಹಗಳಲ್ಲಿ ದಾಖಲಿಸಿದ್ದಾರೆ ಎಂದು ಹೇಳಲಾಗುತ್ತದೆ. ಅವರು ಲಿಂಗೋದ್ಭವ, ಗಜಸಂಹಾರಮೂರ್ತಿ, ಕಾಲಸಂಹಾರ ಮತ್ತು ವೀಣಾಧರದಂತಹ ರೂಪಗಳಿಗೆ ಕೇಂದ್ರೀಕೃತ ಅಧ್ಯಯನಗಳನ್ನು ಮೀಸಲಿಟ್ಟಿದ್ದಾರೆ, ಭಕ್ತಿ ಸಾಹಿತ್ಯದ ಜೊತೆಗೆ ಅವುಗಳನ್ನು ಓದುವ ಮೂಲಕ ಅವುಗಳ ವಿಶಿಷ್ಟ ಅರ್ಥಗಳನ್ನು ಬಹಿರಂಗಪಡಿಸಿದ್ದಾರೆ. ಅವರ ಕೃತಿಯು ಕಾಳಾಮುಖ ಸಂಪ್ರದಾಯಗಳು ಮತ್ತು ಅವರ ಗುರು ನಾಗಸ್ವಾಮಿ ಇಬ್ಬರೂ ದಾಖಲಿಸಿದ ವಾಗೀಶ ಮೂರ್ತಿಯಂತಹ ಅವುಗಳ ನಿರ್ದಿಷ್ಟ ಪ್ರತಿಮೆಗಳು ಸೇರಿದಂತೆ ಶೈವ ಧರ್ಮದ ಇತರ ಎಳೆಗಳನ್ನು ಸಹ ದಾಖಲಿಸುತ್ತದೆ. ಇದಲ್ಲದೆ, ಸದಾಶಿವ ಮೂರ್ತಿ ಮತ್ತು ಪಂಚದೇಹ ಮೂರ್ತಿಯಂತಹ ರೂಪಗಳು ತಂಜಾವೂರು ದೇವಾಲಯದ ಗೋಪುರ ಮತ್ತು ಕುಡಮುಳದಂತಹ ವಾದ್ಯಗಳಿಗೆ ತಾತ್ವಿಕವಾಗಿ ಹೇಗೆ ಸಂಬಂಧ ಹೊಂದಿವೆ ಎಂಬುದನ್ನು ಅವರು ತೋರಿಸಿದ್ದಾರೆ, ಆ ಮೂಲಕ ಶಿಲ್ಪ, ಆಚರಣೆ, ವಾಸ್ತುಶಿಲ್ಪ ಮತ್ತು ಸಂಗೀತವನ್ನು ಒಂದೇ ವ್ಯಾಖ್ಯಾನ ಚೌಕಟ್ಟಿನಲ್ಲಿ ನೇಯ್ಗೆ ಮಾಡಿದ್ದಾರೆ.
Goddess Kala-pidari
ಬಾಲಸುಬ್ರಮಣಿಯನ್ ತಮ್ಮ ಸಂಶೋಧನೆಯಲ್ಲಿ, ಶಾಕ್ತ ಪರಂಪರೆ , ಕೊಟ್ರವೈ ಸಂಪ್ರದಾಯ ಮತ್ತು ರಾಜೇಂದ್ರ ಚೋಳನ ವಿಜಯ ಶಿಲ್ಪಗಳನ್ನು ಪರಿಶೀಲಿಸಿದ್ದಾರೆ, ಜೊತೆಗೆ ಕಾಳಾಪಿಡಾರಿ ಯಂತಹ ಅಪರೂಪದ ರೂಪಗಳನ್ನು ಬೆಳಕಿಗೆ ತರುತ್ತಾರೆ. ತಮಿಳುನಾಡಿನಲ್ಲಿ ಯೋಗಿನಿ ಆರಾಧನೆಯ ಪುರಾವೆಗಳನ್ನು ಪ್ರಸ್ತುತಪಡಿಸಿದವರಲ್ಲಿ ಅವರು ಮೊದಲಿಗರು . ಅಧ್ಯಯನಗಳಲ್ಲಿ ಈ ಪ್ರದೇಶದ ಗಂಗಾ ಶಿಲ್ಪಗಳನ್ನು ಸಂಗ್ರಹಿಸಿದ್ದಾರೆ. ವೈಷ್ಣವ ಧರ್ಮದೊಳಗಿನ ಮಾತೃ-ದೇವತಾ ಆರಾಧನೆಯನ್ನು ಶ್ರೀವತ್ಸದ ರೂಪಕ್ಕೆ ಪರಿವರ್ತಿಸುವ ಕುರಿತಾದ ಅವರ ಪ್ರಬಂಧವು ವಿಶೇಷವಾಗಿ ಮಹತ್ವದ್ದಾಗಿದೆ, ಇದು ಪೂರ್ವ-ಐತಿಹಾಸಿಕ ಬುಡಕಟ್ಟು ಸಂಪ್ರದಾಯವು ಭಕ್ತಿ ಯುಗದಲ್ಲಿ ಹೇಗೆ ಉಳಿದುಕೊಂಡಿತು ಮತ್ತು ಶಿಲ್ಪಕಲೆಯಲ್ಲಿ ಸಾಕಾರವನ್ನು ಕಂಡುಕೊಂಡಿತು ಎಂಬುದನ್ನು ತೋರಿಸುತ್ತದೆ.

ಚಿತ್ರಕವಿತ್ವಕ್ಕೆ ಕೊಡುಗೆ ನೀಡಿದ ಕವಿಗಳ ಪರಂಪರೆಯನ್ನು ಅವರು ಸಂರಕ್ಷಿಸಿದ್ದಾರೆ, ಅವರ ಪದ್ಯಗಳ ಕಲಾತ್ಮಕತೆಯನ್ನು ಬೆಳಕಿಗೆ ತಂದಿದ್ದಾರೆ. ಚಿತ್ರಕವಿತ್ವ ಎಂಬುದು ವ್ಯಾಕರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಾಗ ಪದ್ಯಗಳು ದೃಶ್ಯ ರೂಪವನ್ನು ಪಡೆಯುವ ಕಾವ್ಯವಾಗಿದೆ. ಒಂದು ಕವಿತೆಯು ರಥ ಅಥವಾ ಕಮಲದ ಆಕಾರಕ್ಕೆ ಏರಬಹುದು, ಅದರ ಅರ್ಥವನ್ನು ಬದಲಾಯಿಸದೆ ಅದರ ನೋಟವನ್ನು ಬದಲಿಸಬಹುದು. ತಮಿಳಿನಲ್ಲಿ, ಜ್ಞಾನಸಂಬಂದರ್, ತಿರುಮಂಗೈ ಆಳ್ವಾರ್ ಮತ್ತು ಅರುಣಗಿರಿನಾಥರ್ ಅವರಂತಹ ಕವಿಗಳು ಈ ಕಲೆಯನ್ನು ಬಳಸಿದಾರೆ. ಈ ವಂಶಾವಳಿಯಲ್ಲಿ, ಅನೇಕ ಚಿತ್ರಾತ್ಮಕ ಪದ್ಯಗಳನ್ನು ರಚಿಸಿದ ತಿರುವಾರೂರಿನ ಚಿತ್ರಕ್ಕವಿ ಅಬ್ದುಲ್ ಕಬೂರ್ ಸಾಹಿಬ್ ಅವರನ್ನು ಕುಡವಾಯಿಲ್ ಪರಿಚಯಿಸುತ್ತಾರೆ. ಕುಡವಾಯಿಲ್ ಅವರನ್ನು ಹೆಚ್ಚು ಗೌರವಿಸುತ್ತಾರೆ, ಅವರನ್ನು ತಾವು ಗೌರವಿಸುವ ಭಕ್ತಿ ಗುರುಗಳ ಸ್ಥಾನದಲ್ಲಿ ಇರಿಸಿದ್ದಾರೆ ತಮಿಳಿನಲ್ಲಿ, ಕುಡವಾಯಿಲ್ ಬಾಲಸುಬ್ರಮಣಿಯನ್ ಒಬ್ಬ ಪರಿಚಿತ ಮತ್ತು ಪ್ರಸಿದ್ಧ ಲೇಖಕರಾಗಿ ನಿಲ್ಲುತ್ತಾರೆ, ಅವರ ಕೃತಿಗಳು ಇತರ ಯಾವುದೇ ವಿದ್ವಾಂಸರಿಗಿಂತ ಹೆಚ್ಚು ಓದುಗರನ್ನು ಮುಟ್ಟಿವೆ. ಸಂಪ್ರದಾಯದ ಬಗ್ಗೆ ಪೂರ್ವ ಪರಿಚಯವಿಲ್ಲದೆ ದೇವಾಲಯಕ್ಕೆ ಪ್ರವೇಶಿಸುವ ಸಂದರ್ಶಕರಿಗೆ, ಅವರ ಕೃತಿಗಳು ಹೆಚ್ಚಾಗಿ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತವೆ. ಅವರ ಸುಲಭ ಪ್ರವೇಶಿಕೆಯ ಶೈಲಿಯು ಇತಿಹಾಸದ ತಡೆಗೋಡೆಯನ್ನು ಕಡಿಮೆ ಮಾಡುತ್ತದೆ, ಓದುಗರಿಗೆ ಸುಲಭವಾಗಿ ಸಮೀಪಿಸಲು ಅನುವು ಮಾಡಿಕೊಡುತ್ತದೆ. ಈ ಅರ್ಥದಲ್ಲಿ, ಅವರು ಇತಿಹಾಸವನ್ನು ನಿರೂಪಣೆಯಾಗಿ ಪರಿವರ್ತಿಸುತ್ತಾರೆ, ಇತಿಹಾಸವನ್ನು ತಮ್ಮದೇ ಆದ ಧ್ವನಿಯಲ್ಲಿ ಹೇಳಲಾದ ಆಕರ್ಷಕ ಕಥೆಯಾಗಿ ರೂಪಿಸುತ್ತಾರೆ. ಬಾಲಸುಬ್ರಮಣಿಯನ್ ಎಂದಿಗೂ ತಮ್ಮನ್ನು ತಾವು ಅದ್ಭುತ ಕ್ರಾಂತಿಕಾರಿ ಎಂದು ಭಾವಿಸಲಿಲ್ಲ. ಬದಲಾಗಿ, ಅವರು ಸಂಪ್ರದಾಯದ ಒಳಗಿನಿಂದ ಕೆಲಸ ಮಾಡಿದರು, ಅದನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಿದರು ಮತ್ತು ವ್ಯಾಖ್ಯಾನಿಸಿದರು. ಈ ಸಮಗ್ರತೆ ಮತ್ತು ಸ್ಥಿರತೆಯು ಅವರ ದಶಕಗಳ ಸಂಶೋಧನೆಯಲ್ಲಿ ಮತ್ತು ಅವರ ಕೃತಿಯತ್ತ ಆಕರ್ಷಿತರಾದ ಹೊಸ ಓದುಗರ ನಿರಂತರ ಪ್ರವಾಹದಲ್ಲಿ ಕಾಣಬಹುದು ತಮ್ಮ ಆರಂಭಿಕ ಕೆಲವು ವರ್ಷಗಳಲ್ಲಿ, ಬಾಲಸುಬ್ರಮಣಿಯನ್ ತಂಜಾವೂರನ್ನು ಸೈಕಲ್‌ನಲ್ಲಿ ಸುತ್ತಾಡಿ, ನೇರವಾಗಿ ಜ್ಞಾನವನ್ನು ಸಂಗ್ರಹಿಸಿದ್ದಾರೆ. ಛಾಯಾಗ್ರಹಣದಲ್ಲಿ ತರಬೇತಿ ಪಡೆದ ಅವರು, ಪ್ರತಿಯೊಂದು ಶೋಧನೆಯನ್ನು ಸ್ವತಃ ದಾಖಲಿಸಿದ್ದಾರೆ, ತಾಳ್ಮೆಯಿಂದ ಚಿತ್ರಗಳು ಮತ್ತು ಟಿಪ್ಪಣಿಗಳ ಸಂಗ್ರಹವನ್ನು ನಿರ್ಮಿಸಿದರು. ಬಾಲಸುಬ್ರಮಣಿಯನ್ ಅವರ ಶ್ರದ್ಧೆ ಮತ್ತು ನಿರಂತರ ಪ್ರಯತ್ನಗಳನ್ನು ಮೆಚ್ಚದ ವಿದ್ವಾಂಸರು ತಮಿಳುನಾಡಿನಲ್ಲಿ ಇಲ್ಲ. ಆದರೂ ಕೆಲವು ವಿಮರ್ಶಕರು ಆಕ್ಷೇಪಣೆಗಳನ್ನು ಎತ್ತುತ್ತಾರೆ: ಅವರು ಯಾವಾಗಲೂ ಸಮಗ್ರ ಡೇಟಾವನ್ನು ಪ್ರಸ್ತುತಪಡಿಸುವುದಿಲ್ಲ, ಅವರು ತೀರ್ಮಾನಗಳನ್ನು ಪ್ರಶ್ನಿಸುವ ಬದಲು ಹೇಳುತ್ತಾರೆ ಮತ್ತು ಅವರು ತಮ್ಮ ಓದುವಿಕೆಗಳಲ್ಲಿ ಸಂಪ್ರದಾಯಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ಆದಾಗ್ಯೂ, ಈ ಟೀಕೆಗಳ ಬಲವನ್ನು ಗ್ರಹಿಸಲು, ಅವರ ಬರಹಗಳತ್ತ ಮುಖಮಾಡಬೇಕು ಮತ್ತು ಅವರ ಸಂಶೋಧನೆಯ ವಿನ್ಯಾಸದೊಂದಿಗೆ ಓದಿಗೆ ತೊಡಗಿಸಿಕೊಳ್ಳಬೇಕು.
Mother Goddess Stone
ಕುಡವಾಯಿಲ್ ಅವರ ವಿಧಾನವು ಮಾರ್ಕ್ಸ್ ವೈಧಾನಿಕತೆಯ (ಅಂದಿನ ಜನಜೀವನದ ಇತಿಹಾಸನ್ನು ಆರ್ಥಿಕ ಪರಿಸ್ಥಿತಿ ಮತ್ತು ವರ್ಗಹೋರಾಟದ ನೆಲೆಯಲ್ಲಿ ಗಮನಿಸುವ ಒಂದು ವಿಧಾನ ) ಮಾರ್ಗಗಳಲ್ಲಿ ಮುಂದುವರಿಯುವುದಿಲ್ಲ. ಬದಲಾಗಿ, ಅವರ ಮಾರ್ಗದರ್ಶಕರಾದ ನಾಗಸ್ವಾಮಿಯವರು ರೂಪಿಸಿದ ಬೌದ್ಧಿಕ ಮಾರ್ಗವನ್ನು ಅನುಸರಿಸುತ್ತದೆ. ಅವರ ವಿಚಾರಧಾರೆಯ ಮುಖ್ಯ ಭಾಗದಲ್ಲಿ ಕಲಾಕೃತಿಯಲ್ಲಿ ಅದ್ಭುತ ಸೌಂದರ್ಯವಿದೆ. ಒಂದುಶಿಲ್ಪವು ಅಂತಹ ಪರಿಷ್ಕರಣೆಯನ್ನು ಹೇಗೆ ಪಡೆದುಕೊಂಡಿತು ಎಂಬ ಪ್ರಶ್ನೆಯಿಂದ, ಅವರು ಸಾಹಿತ್ಯ, ಶಿಲ್ಪಕಲೆ ಮತ್ತು ಶಾಸನದ ಮೂಲಕ ತಮ್ಮ ಹುಡುಕಾಟವನ್ನು ವಿಸ್ತರಿಸುತ್ತಾರೆ. ಈ ಎಳೆಗಳನ್ನು ವ್ಯಾಖ್ಯಾನಕ್ಕೆ ತರುವ ಮೊದಲು ಹಂತ ಹಂತವಾಗಿ ವಿವರಿಸುತ್ತಾರೆ. ಆದಾಗ್ಯೂ, ಈ ವಿಧಾನವು ಸಂಪೂರ್ಣ ದೃಷ್ಟಿಕೋನವನ್ನು ನೀಡುತ್ತದೆಯೇ ಎಂದು ಕೇಳಿದರೆ ಉತ್ತರವು ಇಲ್ಲ. ಆದಾಗ್ಯೂ, ಕುಡವಾಯಿಲ್ ಈ ಮಾರ್ಗವನ್ನು ಅಳವಡಿಸಿಕೊಳ್ಳುವುದಿಲ್ಲ. ಅವರ ಸಂಶೋಧನೆಯ ಆಧಾರವೆಂದರೆ ಅವರು ಅಧ್ಯಯನ ಮಾಡುವ ಶಿಲ್ಪದ ಸಾಂಸ್ಕೃತಿಕ ಗೌರವ ಮತ್ತು ಹೆಮ್ಮೆ; ಈ ಸಂವೇದನೆ ಇಲ್ಲದೆ, ಅವರ ಮುಂದಿರುವ ಶಿಲ್ಪಗಳು ಅದ್ಭುತಗಳಾಗಿ ಉಳಿಯುತ್ತವೆ.
Chitra Bhandhanam Poem by Abdul Kapur Sahib
ಕುಡವಾಯಿಲ್ ಬಾಲಸುಬ್ರಮಣಿಯನ್ ಕೇವಲ ಪ್ರತಿಮೆಯ ಅಳತೆಯ ಬದಲಾಗಿ ಧರ್ಮ, ಕಲೆ ಮತ್ತು ಸಂಸ್ಕೃತಿಯನ್ನು ಅಡಿಪಾಯ ಸ್ತಂಭಗಳಾಗಿಟ್ಟುಕೊಂಡು ಕೆಲಸ ಮಾಡಿದ್ದಾರೆ ಮತ್ತು ಅವುಗಳ ಮೂಲಕ ಹೊಸ ತಿಳುವಳಿಕೆಯ ವಿಧಾನಗಳನ್ನು ನೀಡಿದ್ದಾರೆ. ಅವರು ತಮ್ಮ ಆಳವಾದ ನಂಬಿಕೆಗಳನ್ನು ಸಂಶಯಾಸ್ಪದ ವಿಘಟನೆಗೆ ಒಳಪಡಿಸದಿರಬಹುದು, ಆದರೆ ಅವರ ಕೆಲಸವು ಹುಟ್ಟಿಸುವ ಸಾಂಸ್ಕೃತಿಕ ಒಳನೋಟಗಳು ಶ್ರೀಮಂತ ಜ್ಞಾನ ಕ್ಷೇತ್ರಕ್ಕೆ ಹೊಸ ದ್ವಾರವನ್ನು ತೆರೆಯುತ್ತವೆ. ಅಲ್ಲಿಂದ, ಪ್ರತಿಯೊಬ್ಬ ಓದುಗರು ಕುಡವಾಯಿಲ್ ಸ್ವತಃ ಆಯ್ಕೆ ಮಾಡಿದ ಸ್ಪಷ್ಟ ಮಾರ್ಗವನ್ನು ಅನುಸರಿಸುವ ಅಗತ್ಯವಿಲ್ಲದೆಯೇ - ಹೊಸ ಪ್ರಶ್ನೆಗಳನ್ನು ಎತ್ತುವ ಮತ್ತು ಪುರಾವೆಗಳನ್ನು ಸಂಗ್ರಹಿಸುವ - ವೈಯಕ್ತಿಕ ಕುತೂಹಲದ ಪ್ರಯಾಣವನ್ನು ಪ್ರಾರಂಭಿಸಬಹುದು.

 ತಾಮರೈಕ್ಕಣ್ಣನ್
 ಅನುವಾದ: ಕಾವ್ಯ ಎಸ್ ಕೋಳಿವಾಡ್


Thamarai Kannan
ಲೇಖಕ: ತಾಮರೈ ಕಣ್ಣನ್ ಒಬ್ಬ ತಮಿಳು ಬರಹಗಾರ, ಇತಿಹಾಸ ಅಭಿಮಾನಿ, ತಮಿಳು ಶಾಸ್ತ್ರೀಯ ಸಾಹಿತ್ಯ ಮತ್ತು ಜಾನಪದದ ಬಗ್ಗೆ ಒಲವು ಹೊಂದಿರುವ ಅವರು ಸಂಶೋಧನಾ ಲೇಖನಗಳನ್ನು ಬರೆಯುತ್ತಿದ್ದಾರೆ.
ಕಾವ್ಯ ಎಸ್ ಕೋಳಿವಾಡ್
ಅನುವಾದ: ಕಾವ್ಯ ಎಸ್ ಕೋಳಿವಾಡ್ಶಿವಮೊಗ್ಗ ಜಿಲ್ಲೆಯ ಸಾಗರದವರು. ಎಂ.ಎಸ್ಸಿ ಪ್ರಾಣಿಶಾಸ್ತ್ರ ಓದಿ ಪ್ರಸ್ತುತ ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಾವ್ಯ ರಚನೆ ,ಅನುವಾದ, ಕನ್ನಡದಲ್ಲಿ ವಿಜ್ಞಾನ ಬರವಣಿಗೆಯಲ್ಲಿ ಆಸಕ್ತಿ ನಾಟಕ , ಯಕ್ಷಗಾನ , ಹಳೆಗನ್ನಡ ಇಷ್ಟದ ಹವ್ಯಾಸಗಳು .